ಒವೈಸಿಗೆ ಅನುಮತಿ ನಕಾರ: ಸರ್ಕಾರಕ್ಕೆ ನೋಟಿಸ್
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಬಹಿರಂಗ ಸಭೆಗೆ ಅನುಮತಿ ನಿರಾಕರಿಸಿ ನಗರ...

ಬೆಂಗಳೂರು: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಬಹಿರಂಗ ಸಭೆಗೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಮಾರಂಭದ ಕೇಂದ್ರ ಬಿಂದುವಾಗಿ ಎಐಎಂಐಎಂ ಪಕ್ಷದ ಮುಖಂಡ, ಲೋಕಸಭಾ ಸದಸ್ಯ ಅಸಾದುದ್ದೀನ್ ಒವೈಸಿ ಅವರು ಆ.11ರಂದು ಬೆಂಗಳೂರಿನ ಶಿವಾಜಿ ನಗರದ ಚೋಟಾ ಮೈದಾನದಲ್ಲಿ ಬಹಿರಂಗ ಸಭೆ ನಡೆಸುವುದಕ್ಕಾಗಿ ಅನುಮತಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಎಐಎಂಐಎಂ ಪಕ್ಷ ಮನವಿ ಮಾಡಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಓವೈಸಿ ಬಹಿರಂಗ ಸಭೆ ನಡೆಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ .ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಸರ್ಕಾರ ಪರ ವಕೀಲ ವಿಜಯï ಕುಮಾರ್ ಪಾಟೀಲ್ ವಾದ ಮಂಡಿಸಿ, ಬಹಿರಂಗ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನೀಡದ ಆಯುಕ್ತರ ಮನವಿಯನ್ನು ಸಮರ್ಥಿಸಿ ಕೊಂಡರು. ಬಹಿರಂಗ ಸಭೆಗೆ ಅನುಮತಿ ನೀಡಿದರೆ ಒವೈಸಿ ನಗರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
ಆತ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ. ಆತ ಮಾಡಿದ ಪ್ರಚೋದನಕಾರಿ ಭಾಷಣದಿಂದ ಉಂಟಾದ ಕೋಮು ಗಲಭೆಯಿಂದಾಗಿ ಆತನ ವಿರುದ್ಧ ದೇಶದ ವಿವಿದೆಡೆ 37 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಲ್ಲದೇಇತ್ತೀಚಿಗಷ್ಟೆ 1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ ಯಾಕುಬ್ ಮೆಮನ್‍ನನ್ನು ಗಲ್ಲಿಗೇರಿಸಿದ ಕ್ರಮಕ್ಕೆ ರೊಚ್ಚಿಗೆದ್ದ ಆತ ಸಾಮಾಜಿಕ ಜಾಲತಾಣದಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.ಆತನ ಈ ವರ್ತನೆಯಿಂದ ಶಾಂತಿ ಕದಡುವ ಸಾಧ್ಯತೆ ಇದೆ.
ಅಲ್ಲದೇ ಚೋಟಾ ಮೈದಾನದ ಒಳಗಡೆಯೇ ಶಾಲಾ ಕಾಲೇಜುಗಳಿವೆ. ಮಾತ್ರವಲ್ಲ ದೇ ಬಿಬಿಎಂಪಿ ಕಚೇರಿ ಕೂಡ ಮೈದಾನದಲ್ಲಿದೆ. ಅಂದು ಬಹಿರಂಗ ಸಭೆಗೆ ಅವಕಾಶ ನೀಡಿದರೆ ಕಚೇರಿ ಕಾರ್ಯಕ್ಕೆ ಅಡ್ಡಿ ಉಂಟಾಗಲಿದೆ. ಮತ್ತು ಸಮೀಪದಲ್ಲೇ ಹೈಕೋರ್ಟ್ ಮತ್ತು ವಿದಾನ ಸೌಧವಿದ್ದು, ಆತ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಿದರೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂದು ವಾದಿಸಿದರು.
28 ಕಡೆ ಸ್ಪರ್ಧೆ
ಬೆಂಗಳೂರು: ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಪಕ್ಷ ಬಿಬಿಎಂಪಿ ಚುನಾವಣೆಯಲ್ಲಿ ನಗರದ 28 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಐಎಂಐಎ ಎಂಬಹೆಸರಿನ ಈ ಪಕ್ಷ ಈಗಾಗಲೇ ಮುಂಬೈ ಮಹಾನಗರ ಪಾಲಿಕೆ ಮತ್ತು ಮರಾರಾಷ್ಟ್ರ ಚುನಾವಣೆಗಳಲ್ಲಿ ಸ್ಪರ್ಧಿಸಿ ಕೆಲವು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ಹುರುಪಿನಲ್ಲಿ ಈಗ ಬಿಬಿಎಂಪಿಯಲ್ಲೂ ಸ್ಪರ್ಧಿಸಿದೆ. ಹಾಗೆಯೇ ಮುಂಬೈ ಮಹಾನಗರದಲ್ಲಿ ನಡೆಸಿದ ಮಾದರಿಯಲ್ಲೇ ಇಲ್ಲಿಯೂ ಪ್ರಚಾರ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


